One Tap News - Kannada News Daily

Header
collapse
...
Home / Mysore / ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ರವರ ಮೇಲೆ ಶೂ ಎಸೆತ : ಕ್ರಮಕ್ಕೆ ದಸಂಸ ಒತ್ತಾಯ

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ರವರ ಮೇಲೆ ಶೂ ಎಸೆತ : ಕ್ರಮಕ್ಕೆ ದಸಂಸ ಒತ್ತಾಯ

2025-10-10  Mysore Desk  121 views
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ರವರ ಮೇಲೆ ಶೂ ಎಸೆತ : ಕ್ರಮಕ್ಕೆ ದಸಂಸ ಒತ್ತಾಯ

 

ಹುಣಸೂರು. 

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂತಿಗಳಾದ ಬಿ.ಆರ್.‌ ಗವಾಯಿ ರವರ ಮೇಲೆ ಸುಪ್ರಿಂ ಕೋರ್ಟಿನ ನ್ಯಾಯಾಲಯದಲ್ಲಿಯೇ ಶೂ ಎಸೆದ ವಕೀಲ ರಾಕೇಶ್‌ ಕಿಶೋರ್‌ರವರನ್ನು ದೇಶದ್ರೋಹ ಪ್ರಕರಣ ದಾಖಲಾಯಿಸಿ ಬಂಧಿಸುವಂತೆ ಒತ್ತಾಯಿಸಿ  ಶುಕ್ರವಾರ ಹುಣಸೂರು ಉಪವಿಭಾಗಾಧಿಕಾರಿಗಳ  ಮುಖಾಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಗೆ ದಸಂಸ ಮತ್ತು ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ನಿಂಗರಾಜ್‌ ಮಲ್ಲಾಡಿ ರವರು ಮಾತನಾಡಿ ನಮ್ಮ ದೇಶದ ಜನರ ನಂಬಿಕೆಯ ಕೇಂದ್ರ ಬಿಂದುವಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.‌ ಗವಾಯಿ ರವರ ಮೇಲೆ ಕೋರ್ಟಿನ ಒಳಗೆ ಪ್ರಕರಣವೊಂದರಲ್ಲಿ ಶೂ ಎಸೆದು ಅವಮಾನಿಸಿ ದೌರ್ಜನ್ಯ ಎಸಗಿರುವ ವಕೀಲ ರಾಕೇಶ್‌ ಕಿಶೋರ್‌ ಎಂಬುವರನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಬೇಕು. ವಕೀಲ ರಾಕೇಶ್‌ ಕಿಶೋರ್‌ ಸನಾತನ ವಾದವನ್ನು ಪ್ರತಿಪಾದಿಸುವ ವ್ಯಕ್ತಿಯಾಗಿದ್ದು, ದಲಿತ ಸಮುದಾಯದ ಬಿ.ಆರ್.‌ ಗವಾಯಿ ರವರು ಮುಖ್ಯ ನ್ಯಾಯಾಧೀಶರಾಗಿರುವುದನ್ನೇ ಸಹಿಸದೆ ಈ ವಿಕೃತಿ ಮೆರೆದಿದ್ದಾರೆ. ಈ ಘಟನೆಯು ನಮ್ಮ ದೇಶದಲ್ಲಿ ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆ ಇನ್ನೂ ಇದೆ ಎಂಬುವುದನ್ನು ಪುಷ್ಠೀಕರಿಸುವಂತಿದೆ. ದಲಿತ ಸಮಾಜದ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡಮಟ್ಟದ ಅಧಿಕಾರದಲ್ಲಿದ್ದರೂ ಜಾತಿ ಮನಸ್ಸನ್ನು ಹೊಂದಿರುವ ವ್ಯಕ್ತಿಗಳು ಅವರನ್ನು ಒಪ್ಪುತ್ತಿಲ್ಲ. ಜಾತಿ ವ್ಯವಸ್ಥೆ ಅಷ್ಟು ಆಳ ಅಗಲವಾಗಿ ಯಾರ ಕಲ್ಪನೆಗೂ ನಿಲುಕದ ವಿಷಯವಾಗಿದೆ. ಅಂದು ಜ್ಯೋತಿ ಬಾ ಫುಲೆ ರವರ ಧರ್ಮಪತ್ನಿಯಾದ ಸಾವಿತ್ರಿಬಾಯಿ ಫುಲೆ ರವರು ಶಿಕ್ಷಣ ವಂಚಿತ ಅಸ್ಪೃಶ್ಯರ ಮಕ್ಕಳಿಗೆ ಶಿಕ್ಷಣ ಕಲಿಸಲು ಶಾಲೆಯನ್ನು ತೆರೆದು ಶಿಕ್ಷಕಿಯಾಗಿ ಶಾಲೆಗೆ ಹೋಗುವಾದ ಇದೇ ಜಾತಿ ಮನಸ್ಸಿನ ವ್ಯಕ್ತಿಗಳು ಕಲ್ಲು, ಸಗಣಿ, ಕಸ ಕಡ್ಡಿಗಳನ್ನು ಆಕೆಯ ಮೇಲೆ ಎಸೆದು ಅವಮಾನಿಸಿರುವ ಘಟನೆಗೂ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.‌ ಗವಾಯಿ ರವರ ಮೇಲೆ ಅದೇ ಜಾತಿ ಮನಸ್ಸಿನ ಮನುವಾದಿ ಮನಸ್ಸಿನ ವ್ಯಕ್ತಿಗಳು ಶೂ ಎಸೆದು ವಿಕೃತಿ ಮೆರೆದಿರುವ ಈ ಎರಡೂ ಘಟನೆಗಳು ಒಂದೇ ಆಗಿವೆ. ಇಂತಹ ಅನಿಷ್ಟ ಪದ್ದತಿಗಳನ್ನು ನಮ್ಮ ದೇಶದ ದಲಿತ ಸಮಾಜ ಇನ್ನೆಷ್ಟು ವರ್ಷಗಳ ಕಾಲ ಅನುಭವಿಸಬೇಕು ನಮಗೆ ತಿಳಿಯುತ್ತಿಲ್ಲ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್‌ ರವರು ಮಾತನಾಡಿ ಸುಪ್ರೀಂ ಕೋರ್ಟಿನ  ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್‌ ಗವಾಯಿ ರವರ ಮೇಲೆ ವಕೀಲ ರಾಕೇಶ್‌ ಕಿಶೋರ್‌ ಶೂ ಎಸೆದು ಅವಮಾನ ಮಾಡಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲೇ ಒಂದು ಕಪ್ಪು ಚುಕ್ಕೆಯಾಗಿದೆ. ಈತನನ್ನು ಕೂಡಲೇ ಬಂಧಿಸಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು. ದೇಶದ ರೈತರು, ದಲಿತರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ಗೌರವವನ್ನು ಹೊಂದಿದ್ದು, ಇಂತಹ ಹೀನ ಕೃತ್ಯದಿಂದಾಗಿ ನ್ಯಾಯಾಲಯ ವಿಚಲಿತವಾಗಬಾರದು. ಪ್ರಾಮಾಣಿಕ ಸತ್ಯ ನಿಷ್ಠೆಯಿಂದ ನಡೆಯುವ ಯಾವುದೇ ವ್ಯಕ್ತಿಯ ಮೇಲೆ ಇಂತಹ ಘಟನೆಗಳು ನಡೆದಿರುವ ಇತಿಹಾಸವನ್ನು ನಾವು ನೋಡಿದ್ದೇವೆ. ಆದ್ದರಿಂದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.‌ ಗವಾಯಿ ರವರು ತಮ್ಮ ಕರ್ತವ್ಯ ನಿಷ್ಠೆಯನ್ನು ನ್ಯಾಯ, ನೀತಿ, ಸತ್ಯದ ಆಧಾರದ ಮೇಲೆ ಜನರಿಗೆ ನ್ಯಾಯವನ್ನು ಕೊಡಿಸುವ ಕೆಲಸವನ್ನು ನಿರ್ಭೀತಿಯಿಂದ ಮಾಡಬೇಕು ಎಂದರು.  

ಉಪವಿಭಾಗಾಧಿಕಾರಿಗಳ ಕಛೇರಿಯ ಯದುಗಿರೀಶ್‌ ರವರು ಮನವಿ ಸ್ವೀಕರಿಸಿ ಮಾತನಾಡಿ ಕೂಡಲೇ ತಮ್ಮ ಮನವಿಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದಸಂಸ ದ ಹೆಚ್.ಬಿ ದಿವಾಕರ್‌, ಕಿರಿಜಾಜಿ ಗಜೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಹೆಬ್ಬಾಳು ವೆಂಕಟೇಶ್‌, ಹಳ್ಳದಕೊಪ್ಪಲು ದರ್ಶನ್‌, ತಂಬಾಕು ರೈತ ಸಂಘದ ಮೋದೂರು ಶಿವಣ್ಣ, ರೈತ ಸಂಘದ ಅಗ್ರಹಾರ ರಾಮೇಗೌಡ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದೇವರಾಜು ಮುಂತಾದವರು ಹಾಜರಿದ್ದರು.


Share: