ರಾಜ್ಯಾದ್ಯಂತ ನಗರ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊಟೇಲುಗಳು, ಉಪಾಹಾರ ಗೃಹಗಳಲ್ಲಿ ಅನ್ಯ ಭಾಷಿಕ ಕಾರ್ಮಿಕರ ಸಂಖ್ಯೆಯು ವಿಪರೀತವಾಗಿ ಹೆಚ್ಚುತ್ತಿದ್ದು, ಸ್ಥಳೀಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಸಲುವಾಗಿ ಇವರುಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಅಭಿಯಾನವನ್ನು ಸರ್ಕಾರವು ಕೈಗೆತ್ತಿಕೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಬಿಳಿಮಲೆ, ಅನ್ಯಭಾಷಿಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಕನ್ನಡಿಗರನ್ನು ನೇಮಿಸಿ ಎನ್ನುವ ಆಗ್ರಹಗಳಿದ್ದರೂ ಅದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ ಎಂದಿದ್ದಾರೆ.
ಹಿಂದಿ ಬಾರದ ಗ್ರಾಹಕರು ಅಸಹಾಯಕರಾಗಿ ಅನ್ಯಭಾಷಿಕ ಕಾರ್ಮಿಕರೊಂದಿಗೆ ಮಾತನಾಡಲು ಪ್ರಯತ್ನಿಸುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನವಶ್ಯಕ ಸಂಘರ್ಷಗಳನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರವು ಈ ಕ್ರಮಕ್ಕೆ ಮುಂದಾಗಬೇಕಿದೆ ಎಂದಿರುವ ಬಿಳಿಮಲೆ, ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಕನ್ನಡ ಕಲಿಸುವ ಪ್ರಯತ್ನಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ವಿಶೇಷ ಪಠ್ಯವನ್ನೇ ಸಿದ್ಧಪಡಿಸಿದ್ದು, ಇದು ಅತ್ಯುತ್ತಮ ಬೋಧನಾ ಮಾದರಿ ಎಂದು ಸಾಬೀತಾಗಿದೆ ಎಂದಿರುವ ಬಿಳಿಮಲೆ, ಆರೋಗ್ಯ ಇಲಾಖೆಯ ಈ ಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರ ಇರುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.