One Tap News - Kannada News Daily

Header
collapse
...
Home / State News / ರಾತ್ರಿಯಾದರೆ ನಾಗಿಣಿಯಾಗಿ ಬದಲಾಗುವ ಹೆಂಡತಿ; ಪರಿಹಾರ ನೀಡಿ ಎಂದು ಜಿಲ್ಲಾಧಿಕಾರಿಗೆ ಮೊರೆಯಿಟ್ಟ ವ್ಯಕ್ತಿ!

ರಾತ್ರಿಯಾದರೆ ನಾಗಿಣಿಯಾಗಿ ಬದಲಾಗುವ ಹೆಂಡತಿ; ಪರಿಹಾರ ನೀಡಿ ಎಂದು ಜಿಲ್ಲಾಧಿಕಾರಿಗೆ ಮೊರೆಯಿಟ್ಟ ವ್ಯಕ್ತಿ!

2025-10-12  Bangalore  125 views
ರಾತ್ರಿಯಾದರೆ ನಾಗಿಣಿಯಾಗಿ ಬದಲಾಗುವ ಹೆಂಡತಿ; ಪರಿಹಾರ ನೀಡಿ ಎಂದು ಜಿಲ್ಲಾಧಿಕಾರಿಗೆ ಮೊರೆಯಿಟ್ಟ ವ್ಯಕ್ತಿ!

 

ಸೀತಾಪುರ (ಉತ್ತರ ಪ್ರದೇಶ): ಜಿಲ್ಲೆಯ ಜನರು ಆಡಳಿತದಲ್ಲಿ ಎದುರಿಸುತ್ತಿರುವ ಕುಂದುಕೊರತೆಗಳನ್ನು ಆಲಿಸಿ, ಅವರಿಗೆ ಪರಿಹಾರ ನೀಡಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ವಿಚಿತ್ರ ರೀತಿಯ ಸಮಸ್ಯೆ ಹೇಳಿಕೊಂಡಿದ್ದು, ಇದನ್ನು ಕೇಳಿರುವ ಜಿಲ್ಲಾಧಿಕಾರಿ​ ಮತ್ತು ಜನರು ಅವಕ್ಕಾಗಿದ್ದಾರೆ.

ಸೀತಾಪುರ ಜಿಲ್ಲೆಯಲ್ಲಿ ಈ ರೀತಿಯ ವಿಚಿತ್ರ ದೂರೊಂದನ್ನು ಜಿಲ್ಲಾ ಮ್ಯಾಜಿಸ್ಟೇಟ್​ ಆಲಿಸಿದ್ದಾರೆ. ಅಧಿಕಾರಿಗಳ ಸಾರ್ವಜನಿಕ ಕುಂದುಕೊರತೆ ಸಭೆಗೆ ಆಗಮಿಸಿದ್ದ ವ್ಯಕ್ತಿ, ರಾತ್ರಿ ನನ್ನ ಹೆಂಡತಿ ನಾಗಿಣಿಯಾಗಿ ಬದಲಾಗುತ್ತಾಳೆ. ಇಡೀ ರಾತ್ರಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯೆಲ್ಲಾ ಭಯದಲ್ಲೇ ಕಳೆಯುವಂತೆ ಆಗಿದೆ. ಇದಕ್ಕೆ ಪರಿಹಾರ ನೀಡಿ ಎಂದು ಮೊರೆ ಇಟ್ಟಿದ್ದಾನೆ.

ಈ ರೀತಿ ವಿಚಿತ್ರ ದೂರನ್ನು ಇಟ್ಟ ವ್ಯಕ್ತಿ ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದ ದೂರುದಾರ ಮೆರಾಜ್. ಅಕ್ಟೋಬರ್ 4 ರಂದು ನಡೆದ ಸಮಾಧಾನ್ ದಿವಸ್ (ಸಾರ್ವಜನಿಕ ಕುಂದುಕೊರತೆ ಪರಿಹಾರ ದಿನ) ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಷೇಕ್ ಆನಂದ್ ಅವರ ಮುಂದೆ ತನ್ನ ಕಷ್ಟವನ್ನು ಬಿಚ್ಚಿಟ್ಟಿದ್ದು, ಈ ಸಮಸ್ಯೆ ಆಲಿಸಿದ ಅಧಿಕಾರಿಯೇ ದಂಗಾಗಿದ್ದಾರೆ.

ನನ್ನ ಹೆಂಡತಿ ನಸಿಮನ್​ ಮಾನಸಿಕ ಅಸ್ವಸ್ಥತೆ ಹೊಂದಿದ್ದು, ಆಕೆ ರಾತ್ರಿಯಾದರೆ ಸಾಕು ನಾಗಿಣಿಯಂತೆ ಆಡುತ್ತಾಳೆ. ಅಷ್ಟೇ ಅಲ್ಲದೆ, ಹಾವಿನಂತೆ ಹಿಸ್​ ಹಿಸ್​ ಎಂದು ಸದ್ದು ಮಾಡುತ್ತಾ ನನಗೆ ಭಯ ಪಡಿಸುತ್ತಾಳೆ. ಪ್ರತಿನಿತ್ಯ ಆಕೆಯ ಈ ವಿಚಿತ್ರ ಕಾಟಕ್ಕೆ ಬೇಸತ್ತಿದ್ದೇನೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಹೇಳುವ ಮುನ್ನ ಈ ಸಮಸ್ಯೆಯನ್ನು ಸ್ಥಳೀಯ ಪೊಲೀಸರ ಮುಂದೆ ಕೂಡ ಈ ದೂರು ಸಲ್ಲಿಸಲಾಗಿದ್ದು, ಅವರಿಂದ ಯಾವುದೇ ಪ್ರಯೋಜನ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಇದೀಗ ದಿಕ್ಕು ತೋಚದೆ ನಿಮ್ಮಿಂದ ಪರಿಹಾರ ಲಭ್ಯವಾಗಲಿದೆ ಎಂದು ಜಿಲ್ಲಾ ಆಡಳಿತದ ಸಹಾಯಕ್ಕೆ ಮೊರೆಯಿಟ್ಟಿರುವುದಾಗಿ ತಿಳಿಸಿದ್ದಾನೆ.

ಮೆರಾಜ್​ ಸಮಸ್ಯೆ ವಿಲಕ್ಷಣವಾಗಿ ಕಂಡರೂ ಜಿಲ್ಲಾ ಮ್ಯಾಜಿಸ್ಟ್ರೇಟ್​ ಆತನನ್ನು ಸಮಾಧಾನ ಪಡಿಸಿದ್ದು, ಪೊಲೀಸರಿಗೆ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಕುಂದುಕೊರತೆ ಪರಿಹಾರ ಕಾರ್ಯಕ್ರಮದಲ್ಲಿ ಹಾಜರಿದ್ದ ಇತರೆ ಅಧಿಕಾರಿಗಳು ಈತನ ಈ ದೂರು ಅಚ್ಚರಿ ಜೊತೆಗೆ ವಿಚಿತ್ರವಾಗಿ ಕಂಡಿದ್ದು, ಅವರು ಕೂಡ ಆತನ ಸಮಸ್ಯೆಯನ್ನು ಸಮಚಿತ್ತದಿಂದ ಆಲಿಸಿದರು.

ಜಿಲ್ಲಾಧಿಕಾರಿ ಅವರು ವ್ಯಕ್ತಿಯ ಸಮಸ್ಯೆಯನ್ನು ಆಲಿಸಿದ್ದಾರೆ. ಆತನ ಸಮಸ್ಯೆಯನ್ನು ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸರು, ಇದೀಗ ವ್ಯಕ್ತಿಯಿಂದ ದೂರನ್ನು ಸ್ವೀಕರಿಸಿದ್ದು, ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.


Share: